ವಿಮಾನ.... ಇಮಾನ....

Share:
ಮೊನ್ನೆ ಬಾಂಬೆಯಿಂದ ರಾಜೇಶ್ ರೈ ಬಂದಿದ್ದ. ಅವನು ಇತ್ತೀಚಿನ ವರ್ಷಗಳಲ್ಲಿ ವಿಮಾನದಲ್ಲೇ ಬರೋದು! ಅವನ ಜೊತೆ ಲಾಲ್ಬಾಗ್,  ಗರುಡಾ ಮಾಲ್, ಐನಾಕ್ಸ್ ಅಂತೆಲ್ಲ ಸುತ್ತಾಡಿ ಬಂದೆ. ಅವನು ಚಿಕ್ಕವಿನಿರುವಾಗ ದೊಡ್ಡತ್ತೆ ಮನೆಗೆ ಅಂತ ಬೆಂಗಳೂರಿಗೆ ಬರುತ್ತಿದ್ದನಂತೆ. ಹಾಗೇ ಒಂದುಸರ್ತಿ ಬಂದಾಗ ಇವನ ಕಣ್ಣಿಗೆ ಆಕಾಶದಲ್ಲಿ ಹಾರುವ ವಿಮಾನ ಬೀಳಬೇಕೆ? ದೊಡ್ಡತ್ತೆ ಬಳಿ ಮುಗ್ಧವಾಗಿ ವಿಮಾನ ನೋಡೋಕೆ ಕರ್ಕೊಂಡು ಹೋಗು ಅಂತ ಕೇಳಿಕೊಂಡನಂತೆ. ಅದಕ್ಕೆ ಅವರು ಕೋಪದಿಂದ "ನಾವೇ ವಿಮಾನ ನೋಡಿಲ್ಲ.. ನಿಂಗೆ ತೋರಿಸ್ಬೇಕಾ' ಅಂತ ಜೋರು ಮಾಡಿದ್ರಂತೆ... ಈಗ ಅವ್ರನ್ನು ನೋಡಲು ವಿಮಾನದಲ್ಲೇ ಬರೋ ಭಾಗ್ಯ ನನ್ನದ್ದು  ಎಂದು ನೆನಪಿಸಿಕೊಂಡ.


ವಿಮಾನ ನೋಡುವ ವಿಷಯದಲ್ಲಿ ನಾನು ಲಕ್ಕಿ. ಬಹುಶಃ ಒಂದನೇ ಕ್ಲಾಸ್ ನಲ್ಲಿಯೇ ದೊಡ್ಡ ಫ್ಯಾನ್ ಇರುವ ವಿಮಾನ ನೋಡಿದ್ದೆ. ನನಗೆ ವರ್ಷಕ್ಕೊಮ್ಮೆ ಹೆಲಿಕಾಪ್ಟರನ್ನು ಹತ್ತಿರದಿಂದ ನೋಡುವ ಅವಕಾಶವನ್ನು ರಬ್ಬರ್ ನಿಗಮ ಪುಕ್ಕಟೆಯಾಗಿ ನೀಡಿತ್ತು. ಡಬ್ ಡಬ್ ಡಬ್ ಬಡ್ ಬಡ್ ಡ್ರಡ್ರಡ್ರಡ್ರಡ್ರಅಅಅ ಅಂತ ಹೆಲಿಕಾಪ್ಟರ್ ಫ್ಯಾನ್ ತಿರುಗಿಸಿಕೊಂಡು ಬಂದರೆ ಸಾಕು, ನಾನು ಮನೆಯಿಂದ ಹೊರಬಂದು "ಇಮಾನ ಇಮಾನ" ಅಂತ ಬೊಬ್ಬೆ ಹೊಡೆಯುತ್ತಿದ್ದೆ.

ನಾನೊಬ್ನೆ ಅಲ್ಲ, ನನ್ನೂರಿನ ಮಕ್ಕಳು ದೊಡ್ಡವೆರೆನ್ನದೆ ಎಲ್ಲರೂ ಹೆಲಿಕಾಪ್ಟರ್ ನೋಡಲು ಕುಂಟಿಕಾನ ಗ್ರೌಂಡ್ ನಲ್ಲಿ ನೆರೆದಿರುತ್ತಿದ್ದರು. ಹೆಲಿಕಾಪ್ಟರ್ ಬರೋ ದಿನ ಹೆಚ್ಚಿನವರು ಕೆಲಸಕ್ಕೆ ರಜೆ ಹಾಕುತ್ತಿದ್ದರು. ನಾವು ಕ್ಲಾಸಿಗೂ ಹೋಗುತ್ತಿರಲಿಲ್ಲ.


ನಾನು ಮೊದಲು ನೋಡಿದ ಹೆಲಿಕಾಪ್ಟರ್ ಯಾವ ಕಂಪನಿಯದ್ದು ಅಂತ ಗೊತ್ತಿಲ್ಲ. ಉದ್ದದ್ದ ರೆಕ್ಕೆಗಳಿರುತ್ತಿದ್ದವು. ಅದು ತಿರುಗಿದಾಗ ಮೈದಾನ ತುಂಬಾ ಗಾಳಿ ಬೀಸುತ್ತಿತ್ತು. ನಿಂತಿದ್ದಾಗ ಫ್ಯಾನ್ ಮೆಲ್ಲಗೆ ತಿರುಗುತ್ತಿತ್ತು. ಅದರ ಡ್ರಮ್ ಗೆ ಮದ್ದು ತುಂಬಿಸಿದ ನಂತರ ಅದರ ಫ್ಯಾನ್ ಜೋರಾಗಿ ತಿರುಗುತ್ತಿತ್ತು. ನಂತರ ಅದು ಸ್ವಲ್ಪ ದೂರ ಚಲಿಸಿ ಒಮ್ಮೆಗೆ ಮಾರ್ಗ ಬಿಟ್ಟು ಆಕಾಶದಲ್ಲಿ ತೇಲುತ್ತ ತೇಲುತ್ತ ಮೇಲಕ್ಕೆ ಹೋಗುತ್ತಿತ್ತು. ಎಲ್ಲಾ ರಬ್ಬರ್ ಮರಗಳಿಗೂ ಮದ್ದು ಸ್ಪ್ರೇ ಮಾಡುತ್ತ ಅದು ಹಾರುವುದನ್ನು ನೋಡುವುದು ತುಂಬಾ ಮಜಾವೆನಿಸುತ್ತಿತ್ತು.

ಅದನ್ನು ಬಿಡೋದು ಹೇಗೆ ಅಂತ ಪಕ್ಕದಲ್ಲಿದ್ದ ಸುನಿಲನಿಗೆ ಕೇಳುತ್ತಿದ್ದೆ. ಆತ ತುಂಬಾ ತಿಳಿದವರಂತೆ ಅದರಲ್ಲಿ ಉದ್ದದ್ದ ಗಿಯರ್ ಇರುತ್ತೆ. ಅದನ್ನು ಮೇಲೆ ಮಾಡಿದ್ರೆ ಇಮಾನ ಮೇಲೆ ಹೋಗುತ್ತೆ.. ಕೆಳಗೆ ಮಾಡಿದ್ರೆ ಕೆಳಗೆ ಇಳಿಯುತ್ತೆ ಎಂದೆಲ್ಲ ಓಳು ಬಿಡುತ್ತಿದ್ದ. ನಾನು ಅಚ್ಚರಿಯಿಂದ ನೋಡುತ್ತಿದ್ದೆ. ನಾನೂ ದೊಡ್ಡವನಾದ ಮೇಲೆ ಇಂತಹ ಇಮಾನ ತೆಗಿತಿನಿ ಎಂದೆಲ್ಲ ನಾನು ಹೇಳುತ್ತಿದ್ದೆ. ಅವನೀಗ 12 ಟೈರಿನ ಲಾರಿ ಬಿಡುತ್ತಿದ್ದಾನೆ.

ನಾವು ಒಂದು ದಿನ ಗ್ರೌಂಡ್ ನಲ್ಲಿ ಇಮಾನದ ಆಟ ಆಡುವುದನ್ನು ನೋಡುತ್ತಿದ್ದ ಶೇಷಮ್ಮ ಟೀಚರ್ ನಮಗೆ ದೊಡ್ಡ ವಿಮಾನ ತೋರಿಸುವುದಾಗಿ ಹೇಳಿದ್ರು. ಅದಕ್ಕಾಗಿ ಐವತ್ತು ರೂಪಾಯಿಯ ಮಂಗಳೂರು ಪ್ರವಾಸ ಆಯೋಜಿಸಿದ್ರು. ನಮಗೆ ಖುಷಿಯೋ ಖುಷಿ. ನಾವೆಲ್ಲ ಪುಟ್ಟ ಪುಟ್ಟ ಕಾಗದದಲ್ಲಿ "ಕುಂಟಿಕಾನ ಶಾಲಾ ಮಕ್ಕಳ ಪ್ರವಾಸಕ್ಕೆ ಜಯವಾಗಲಿ.. ಜೈ ಅಂತ ಬರೆದಿಟ್ಟೇವು.

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನಗಳನ್ನು ಹತ್ತಿರದಿಂದ ನೋಡಿದೆವು. ಊರಲ್ಲಿ ನೋಡಿದ ಕಾಪ್ಟರ್ ಗಿಂತ ಇದು ದೊಡ್ಡದಾಗಿತ್ತು. ಅದು ದುಂಬಿಯ ಆಕಾರದಲ್ಲಿದ್ರೆ ಇದು ಮೀನಿನ ಆಕಾರದಲ್ಲಿತ್ತು. ಉದ್ದದ್ದ ರಸ್ತೆಯಲ್ಲಿ ಸ್ಪೀಡಾಗಿ ಹೋಗಿ ಒಮ್ಮೆಗೆ ಆಕಾಶಕ್ಕೆ ನೆಗೆಯುತ್ತಿತ್ತು. ಒಂದು ವಿಮಾನ ಹಾರಿದಾಗ ಮತ್ತೊಂದು ಇಳಿಯುತ್ತಿತ್ತು. ಒಂದೈದು ನಿಮಿಷ ಕಳೆದಾಗ ಮತ್ತೊಂದು ಬಂದಿಳಿಯುತ್ತಿತ್ತು. ಐದ್ನಿಮಿಷದಲ್ಲಿ ದುಬೈಗೆ ಹೋಗಿ ಬಂತು ಅಂತ ಪಕ್ಕದಲ್ಲಿದ ಸುನಿಲ ಓಳು ಬಿಡುತ್ತಿದ್ದ. ವಿಮಾನದಿಂದ ಇಳಿಯುವ/ಹತ್ತುವ ಜನರನ್ನು ನೋಡಿದಾಗ ದೊಡ್ಡವನಾದ ಮೇಲೆ ನಾನೂ ದುಬೈಗೆ ಹೀಗೆ ಹಾರಿಹೋಗಿ ಬರ್ತಿನಿ ಅಂತ ಕನಸು ಕಾಣುತ್ತಿದ್ದೆ. ಇನ್ನೂ ಹೋಗಿಲ್ಲ.

****
ಮೊನ್ನೆ ನನ್ನ ಕ್ಲೋಸ್ ಫ್ರೆಂಡೊಬ್ಳ ಜೊತೆ "ಏರೋ ಇಂಡಿಯಾ 2013' ವೈಮಾನಿಕ ಪ್ರದರ್ಶನ ನೋಡೋಕೆ ಹೋಗಿದ್ದೆ. ಅವ್ಳಿಗೂ ವಿಮಾನ ಅಂದ್ರೆ ಏನೋ ಆಕರ್ಷಣೆ ಅಂತೆ. ಈಗ್ಲೂ ವಿಮಾನದ ಸದ್ದು ಕೇಳಿದ್ರೆ ಟೇರಸ್ ಹತ್ತಿ ನೋಡ್ತಾಳಂತೆ.

ಏರ್ ಶೋ ಟಿಕೇಟು ಸಿಕ್ಕಿದ್ದೇ ದೊಡ್ಡ ಪುಣ್ಯ. ಆ್ಯಕ್ಸಿಸ್ ಬ್ಯಾಂಕ್ ನ ದುಡ್ಡು ನುಂಗುವ ಮೆಷಿನ್ ಒಳಗೆ ಸಾವಿರ ರೂಪಾಯಿ ಹಾಕಿದಾಗ ರಸೀದಿ ಹೊರಗೆ ಬಂದಿತ್ತು. ಅದನ್ನು ಹಿಡಿದುಕೊಂಡು ಟಿಕೇಟ್ ಪಡೆಯಲು ಬ್ಯಾಂಕಿನ ಹೊರಗಿನವರೆಗೆ ಇದ್ದ ಕ್ಯೂ ಸೇರಿಕೊಂಡೆವು. ದುರಾದೃಷ್ಟ, ಅವತ್ತೇ ಸರ್ವರ್ ಡೌನ್ ಆಗ್ಬೇಕಾ? ಒಂದೈವತ್ತು ಜನರಿಗೆ ಟಿಕೇಟು ನೀಡಿದ ಬ್ಯಾಂಕ್ ಬಾಗಿಲು ಹಾಕಲು ಪ್ರಯತ್ನಿಸಿತು. ಎಲ್ಲರೂ ಪ್ರತಿಭಟನೆ ಮಾಡತೊಡಗಿದ ನಂತರ ಟಿಕೇಟು ನೀಡಿತ್ತು. ಬೆಳಗ್ಗೆ ಹೋದ ನಮಗೆ ಸಂಜೆ ವೇಳೆಗೆ ಟಿಕೇಟು ಸಿಕ್ಕಿತ್ತು.. ಅಜ್ಜಿ ಮಾಡಿದ ಪುಣ್ಯ...!

ಶೋ ನೋಡುವ ಹಿಂದಿನ ದಿನ ಬೇಗ ನಿದ್ದೆ ಬರಲಿಲ್ಲ. ಅನಿವಾರ್ಯವಾಗಿ ಬೇಗ ಎದ್ದು 27 ರೂಪಾಯಿ ಟಿಕೇಟು ಮಾಡಿ ಬಸ್ಸಿನಲ್ಲಿ ಹೋದೆವು. ನಮ್ಮ ದುರಾದೃಷ್ಟ. ನಮ್ಗೆ ಸಿಕ್ಕಿದ್ದು ಗೇಟ್ ನಂಬರ್ 8. ಅದನ್ನು ಹುಡುಕಿ ಹುಡುಕಿ ಸುಸ್ತಾದೆವು. ಹೇಗೋ ಆಟೋದಲ್ಲಿ ಹೋಗಿ ಅಲ್ಲಿಗೆ ತಲುಪಿದೆವು. ರಣ ಬಿಸಿಲು. ಆಕಾಶದಲ್ಲಿ ಉಕ್ಕಿನ ಹಕ್ಕಿಗಳು ಸದ್ದು ಮಾಡುತ್ತಿದ್ದವು.

ನಾವು ಅಲ್ಲಿ ತಲುಪಿದಾಗಲೇ ರೆಡ್ ಬುಲ್ ಆಕಾಶದಲ್ಲಿ ಕಸರತ್ತು ನಡೆಸುತ್ತಿತ್ತು. ಎಷ್ಟು ಚಿಕ್ಕದಿದೆ ಅದ್ರಲ್ಲಿ ಪೈಲಟ್ ಇರ್ತಾನ ಅಂತ ಚಿಕ್ಕ ಹುಡುಗನೊಬ್ಬ ಆತನ ತಾಯಿಯಲ್ಲಿ ಮುಗ್ದವಾಗಿ ಕೇಳುತ್ತಿದ್ದ. ಅದನ್ನು ಕೇಳಿಸಿಕೊಂಡು ನಕ್ಕ ನನ್ನ ಸ್ನೇಹಿತೆ "ವಿಮಾನ ಮೇಲೆ ಹಾರಿದಾಗ ಚಿಕ್ಕದಾಗಿರುತ್ತದೆ, ಆಗ ಅದಕ್ಕೆ ಪೈಂಟ್ ಕೊಡೊದು ಸುಲಭ' ಅನ್ನೋ ಜೋಕ್ಸ್ ನೆನಪಿಸಿದಳು.

***

ನಂತರ ನನ್ನ ಉತ್ಸಾಹ ಹೆಚ್ಚಿಸಿದ್ದು ಯುಎಸ್ ಏರ್ ಫೋರ್ಸ್ ನ ದೊಡ್ಡ ವಿಮಾನ. ನನ್ನ ಫ್ರೆಂಡ್ ಅದನ್ನು "ಆನೆ' ಅಂದಳು. ಅಲ್ಲ ಅದು ದೊಡ್ಡ ತಿಮಿಂಗಿಲದಂತೆ ಇದೆ ಅಂದೆ.. ಯಾವುದನ್ನೂ ಒಪ್ಪಿಕೊಳ್ಳದ ಅವಳು ಅದಕ್ಕೆ ವಿರೋಧ ವ್ಯಕ್ತ ಪಡಿಸಲಿಲ್ಲ. ನನ್ನ ಪುಣ್ಯ..!

ಆ ತಿಮಿಂಗಿಲ ಎದೆ ಝುಂ  ಎಣಿಸುವ ಸದ್ದು ಮಾಡುತ್ತ ರನ್ ವೇಯಲ್ಲಿ ವೇಗವಾಗಿ ಸಾಗಿ ಆಕಾಶದಲ್ಲಿ ನೆಗೆದು ಚಮತ್ಕಾರಗಳನ್ನು ಮಾಡತೊಡಗಿತು. ಎಷ್ಟಾದರೂ ದೊಡ್ಡ ಪ್ರಾಣಿ ಅಲ್ವ. ಅದರ ಸರ್ಕಸ್ ಕಡಿಮೆ ಎಂದೆನಿಸಿತು. ಆದ್ರೂ ತಿಮಿಂಗಿಲ ಆಕಾಶದಲ್ಲಿ ಹಾರೋದನ್ನು ನೋಡುವುದೇ ಕಣ್ಣಿಗೆ ಹಬ್ಬ..

**
ರೆಡ್ ಬುಲ್ ಗಳ ಆಟವೂ ಕಡಿಮೆ ಇರಲಿಲ್ಲ. ನಂತರ ಹಾರುವ ಹೆಲಿಕಾಪ್ಟರುಗಳಿಂದ ರೋಫ್ ಸಹಾಯದಿಂದ ಮನುಷ್ಯರು ಕೆಳಗಿಳಿಯುತ್ತಿದ್ದದ್ದು ಪ್ರಮುಖ ಆಕರ್ಷಣೆ. ಬಳ್ಳಿಯಲ್ಲಿ ಮನುಷ್ಯರನ್ನು ನೇತಾಡಿಸುತ್ತಲೇ ಮೈದಾನಕ್ಕೆ ಸುತ್ತು ಹೊಡೆದವು. ಮತ್ತೊಂದು ಕಾಪ್ಟರ್ ನಾನೇನೂ ಕಮ್ಮಿ ಇಲ್ಲ ಎಂಬಂತೆ ಭಾರವಾದ ವಸ್ತುವೊಂದನ್ನು ನೇತಾಡಿಸುತ್ತ ಹಾರುತ್ತಿತ್ತು.

**
ನನಗೆ ತುಂಬಾ ಇಷ್ಟವಾದದ್ದು ರಷ್ಯಾದ ಫ್ಲೈಯಿಂಗ್ ಬುಲ್ ಗಳ ಸಾಹಸ. ಅದರೊಳಗೆ ಇದ್ದದ್ದು ರಷ್ಯಾದ ನೈಟ್ಸ್ ಕ್ಲಬ್ ತಂಡವಂತೆ. ಅವು ಒಂದಕ್ಕೊಂದು ಡಿಕ್ಕಿ ಹೊಡೆಯುವಂತೆ ಹತ್ತಿರ ಬಂದು ನಮ್ಮನ್ನು ಬೆಚ್ಚಿ ಬೀಳಿಸುತ್ತಿದ್ದವು. ಮೈಸುಡುವ ಬಿಸಿಲನ್ನು ಲೆಕ್ಕಿಸಿದೆ ಸಂಜೆವರೆಗೆ ಇದ್ದು ಇಂತಹ ಹಲವು ವೈಮಾನಿಕ ಸಾಹಸ ನೋಡಿಬಂದಾಗ..ನಿರಾಶೆಯಾಗಲಿಲ್ಲ.
__
ಇನ್ನೆರಡು ವರ್ಷ ಕಳೆದ ನಂತರ ನೆಸ್ಟ್ ಆಟೋ ಶೋಗೂ ಬರೋಣ ಅಂತ ನಾನೂ ನನ್ನ ಫ್ರೆಂಡ್ ತೀರ್ಮಾನಿಸಿಕೊಂಡ್ವಿ..

ಇಲ್ಲಿವರೆಗೆ ಓದಿದವರಿಗೆ ಥ್ಯಾಂಕ್ಯು ;-)

1 comment: